ಗೋಶಾಲೆಗೆ ದನ ಸಾಗಾಟ ಮಾಡುತ್ತಿದ್ದ ವಾಹನಕ್ಕೆ ತಡೆ!

sullia lorryಸುಳ್ಯ: ಕೊಲ್ಲಮೊಗ್ರದಿಂದ ಮೈಸೂರಿನ ಪಿಂಜಾರಾಪೋಲ್ ಗೋಶಾಲೆಗೆ ೧೩ ಜಾನು ವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದ ಕೆಲವರು ಲಾರಿಯನ್ನು ಪೊಲೀಸರಿಗೆ ಒಪ್ಪಿಸಿದರು.
ಕಲ್ಮಕಾರು ಗ್ರಾಮದ ಇಡ್ಯಡ್ಕ ಗಿರೀಶ್ ಭಟ್ ಅವರು ಕೊಲ್ಲಮೊಗ್ರ ಪರಿಸರದ ಕೊಪ್ಪಡ್ಕ ಚಂದ್ರಶೇಖರ್, ಶಿವಾಲ ಶಿವರಾಮ ಭಟ್, ಚನಿಲ ವೆಂಕಟ್ರಮಣ ಭಟ್ ಇತರ ರಿಂದ ಸಂಗ್ರಹಿಸಿದ ೯ ಹೋರಿ, ೪ ದನ ಗಳನ್ನು ಕ್ಯಾಂಟರ್ ಲಾರಿಯಲ್ಲಿ ಮೈಸೂರಿನ ಪಿಂಜರಾಪೋಲ್‌ಗೆ ಕೊಂಡೊಯ್ಯುತ್ತಿದ್ದರು. ಬೈಕ್ ಸವಾರರು ಬಂದು ಲಾರಿಯನ್ನು ತಡೆದು ನಿಲ್ಲಿಸಿ ಎಲ್ಲಿಗೆ ಎಂದು ವಿಚಾರಿಸಿ ದಾಗ ಪಿಂಜರಾಪೋಲ್‌ಗೆ ಕೊಂಡೊಯ್ಯು ತ್ತಿರುವುದೆಂದು ಹೇಳಿ ಕೊಲ್ಲಮೊಗ್ರ ಪಂಚಾಯತ್‌ನ ಅನುಮತಿ ಪತ್ರವನ್ನು ತೋರಿಸಿದರೂ ಒಪ್ಪದ ಯುವಕರು ಪೊಲೀಸ್ ಠಾಣೆಗೆ ಹೋಗಲೇಬೇಕೆಂದು ಒತ್ತಾಯಿಸಿದ್ದರಿಂದ ಲಾರಿಯನ್ನು ಠಾಣೆಗೆ ತರಲಾಯಿತು.

ವಿಚಾರಣೆ ನಡೆಸಿದ ಎಸ್.ಐ. ಗಿರೀಶ್ ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯದೆ ಪಿಂಜರಾಪೋಲ್‌ಗೆ ಕೊಂಡೊಯ್ಯುವರೆಂದು ಖಚಿತಪಡಿಸಿಕೊಂಡರು. ಆದರೆ ಇವರ ಮೇಲೆ ಲಿಖಿತ ದೂರು ನೀಡಲು ಯುವಕರು ತಯಾರಿಲ್ಲದಿದ್ದು ದರಿಂದ ಇನ್ನು ಮುಂದಕ್ಕೆ ೬ ಜಾನುವಾರಿ ಗಿಂತ ಹೆಚ್ಚು ಜಾನುವಾರುಗಳನ್ನು ಕ್ಯಾಂಟರ್ ವಾಹನದಲ್ಲಿ ಸಾಗಿಸಬಾರದೆಂದು ಎಚ್ಚರಿಕೆ ನೀಡಿ ಬಿಡಲಾಯಿತು

Advertisements
Posted in ಕರಾವಳಿ, ಕರ್ನಾಟಕ, ಜ.ಕಿ | ನಿಮ್ಮ ಟಿಪ್ಪಣಿ ಬರೆಯಿರಿ

ಕಂಪೆನಿ ಯೋಜನೆ ಗ್ರಾಹಕನಿಗೆ ತಲುಪದಿದ್ದರೆ ರೀಟೇಲರ್ ಸಂಪರ್ಕ ಕಟ್!

airtelವಿಟ್ಲ: ಏರ್‌ಟೆಲ್ ಕಂಪನಿ ಈ ಹಿಂದೆ ಗ್ರಾಹಕರ ಟ್ಯಾರೀಫ್ ಪ್ಲಾನ್‌ಗಳನ್ನು ಯಾವುದೇ ಮುನ್ಸೂಚನೆ ನೀಡದೆ ಬದಲಾಯಿಸಿ ತೊಂದರೆ ನೀಡುತ್ತಿದ್ದರೆ ಇದೀಗ ಕಂಪನಿ ನೀಡುವ ಹೊಸ ಯೋಜನೆಗಳಿಗೆ ಗ್ರಾಹಕರನ್ನು ತರಬೇಕೆಂಬ ಒತ್ತಡವನ್ನು ರೀಟೇಲರ್‌ಗಳಿಗೆ ಹೇರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಏರ್‌ಟೆಲ್ ವ್ಯಾಪ್ತಿಯಲ್ಲಿರುವ ಡಿಟಿಎಚ್, ಮೊಬೈಲ್ ಸೇವೆಗಳಾದ ಮೆಮೋ, ಹೆಲೋ ಟ್ಯೂನ್, ಏರ್‌ಟೆಲ್ ಮನಿ ಸೇರಿ ವಿವಿಧ ಯೋಜನೆಗಳ ವ್ಯಾಪ್ತಿ ಯಲ್ಲಿ ಗ್ರಾಹಕರನ್ನು ಹೆಚ್ಚು ತರುವ ನಿಟ್ಟಿನಲ್ಲಿ ಕಂಪನಿಯ ರಿಟೇಲರ್‌ಗಳಿಗೆ ಮೆಸೇಜ್ ಮೂಲಕ ವಾರ್ನಿಂಗ್ ಮಾಡುತ್ತಿದ್ದಾರೆ. ಇದಾಗಿಯೂ ರಿಟೇಲರ್‌ಗಳು ಬಳಕೆದಾರ ರನ್ನು ಮನವೊಲಿಸುವಲ್ಲಿ ವಿಫಲವಾದರೆ ಅವರಿಗೆ ನೀಡಿದ ಡೆಮೋ ಸಿಮ್ಮುಗಳ ಸಂಪರ್ಕವನ್ನು ಸ್ಥಗಿತಗೊಳಿಸುತ್ತಾರೆ. ಇದರಿಂದ ರಿಚಾರ್ಜ್ ಕೂಡಾ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ಅಂಗಡಿ ಮಾಲಿಕರು ತಲುಪುತ್ತಿದ್ದಾರೆ. ಸುಮಾರು ಒಂದು ತಿಂಗಳಿಂದ ಬಂಟ್ವಾಳ ವ್ಯಾಪ್ತಿಯ ರಿಟೇಲರ್‌ಗಳಿಗೆ ಮೆಸೇಜ್ ರವಾನೆ ಮಾಡುತ್ತಿರುವ ಏರಿಯಾ ಮ್ಯಾನೇಜರ್‌ಗಳು, ಕಂಪನಿ ನೀಡುವ ಯೋಜನೆಗಳನ್ನು ಗ್ರಾಹಕರಿಗೆ ನೀಡದ ಸುಮಾರು ೮೬ ರಿಟೇಲರ್‌ಗಳ ಡೆಮೋ ಸಿಮ್ಮುಗಳ ಸಂಪರ್ಕ ಮೇ ೨೩ರಂದು ನಿಲ್ಲಿಸಿದ್ದಾರೆ.
೫ಸಾವಿರಕ್ಕೂ ಹೆಚ್ಚು ವ್ಯವಹಾರ ಮಾಡುವ ರಿಟೇಲರ್‌ಗೆ ಮಾತ್ರ ಕಂಪನಿ ನೀಡುವ ಹೊಸ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸುವ ಕಂಡೀಷ ನ್‌ಗಳನ್ನು ಹೇರುತ್ತಿದ್ದು, ತಿಂಗಳಿಗೆ ೨ ವಿಶೇಷ ಯೋಜನೆಗಳನ್ನು ಜನರಿಗೆ ಪರಿಚಯಿಸಿ ಎಂದು ಹೇಳುತ್ತಿದೆ. ಹಾಗೆ ಪರಿಚಯಿಸಲು ವಿಫಲರಾದವರಿಗೆ ವಾರ್ನ್ ಮಾಡಿ ಬಳಿಕ ಸೇವೆಯನ್ನು ಕಡಿತ ಮಾಡಲಾಗುತ್ತಿದೆ ಎನ್ನುವುದು ಕಂಪನಿ ವಾದ.
ಏನಿದು ಮೆಮೋ?
‘ಮೈ ಏರ್‌ಟೆಲ್ ಮೈ ಆಫರ್’ ಯೋಜನೆಯಲ್ಲಿ ಗ್ರಾಹಕನ ನಂಬ್ರಕ್ಕೆ ಇರುವ ವಿಶೇಷ ಸೇವೆಗಳನ್ನು ಕಂಪನಿ ನೀಡಿದ್ದು, ರಿಟೇಲರ್ ಡೆಮೋ ಸಿಮ್ಮಿನಲ್ಲಿ ಇದನ್ನು (*೧೨೨*ಗ್ರಾಹಕನ ನಂಬರ್#) ಹಾಕುವ ಮೂಲಕ ಪಡೆಯ ಬಹುದು. ಹೀಗೆ ಯೋಜನೆಗಳನ್ನು ಗ್ರಾಹಕರಿಗೆ ತಿಳಿಸಿದಲ್ಲಿ ಮಾಮೂಲಾಗಿ ಸಿಗುವ ಶೇಕಡಾ ೩ ಕಮಿಷನ್ ಜೊತೆಗೆ ಹೆಚ್ಚುವರಿಯಾಗಿ ೩ಶೇಕಡಾ ಕಮಿಷನ್ ದೊರೆಯುತ್ತದೆ. ಇದರ ಜೊತೆಗೆ ಬೇರೆ ಬೇರೆ ಯೋಜನೆಗಳಿಗೆ ಗ್ರಾಹಕರನ್ನು ಪರಿಚಯಿಸಿದರೆ ವಿಶೇಷ ಕಮಿಷನ್ ಕಂಪನಿ ನೀಡುತ್ತದೆ.

“ರಿಟೇಲರ್ ಯೂನಿಯನ್ ಇಲ್ಲವಾದುದರಿಂದ ಕಂಪನಿ ತನಗಿಷ್ಟ ಬಂದಂತೆ ಕಾನೂನುಗಳನ್ನು ರೂಪಿಸಿಕೊಂಡು ಷರತ್ತುಗಳನ್ನು ಹೇರುತ್ತಿದೆ. ಗ್ರಾಹಕರ ಕರೆ ದರದಲ್ಲಿ ಹೆಚ್ಚಳ ಮಾಡುವ ಕಂಪನಿ ಹಲವಾರು ವರ್ಷಗಳಿಂದ ಶೇ.೩ ಕಮಿಷನ್ ಮಾತ್ರ ನೀಡುತ್ತಿದೆ. ಒತ್ತಡಗಳನ್ನು ಹೇರಲಿ ಹಾಗೆಂದು ಸಾಧ್ಯವಾಗದ ವ್ಯಕ್ತಿಯ ಸಂಪರ್ಕ ಕಡಿತ ಮಾಡುವುದು ಹೀಗೆ ಮುಂದುವರಿದಲ್ಲಿ ಯೂನಿಯನ್   ಮಾಡಿ ಕಂಪನಿ ವಿರುದ್ದ ಪ್ರತಿಭಟಿಸುತ್ತೇವೆ

– ಹೆಸರು ಹೇಳಲಿಚ್ಚಿಸದ ರಿಟೇಲರ್

ಕಂಪನಿ ಗ್ರಾಹಕರಿಗೆ ನೀಡುವ ಯೋಜನೆಯನ್ನು ಸಮರ್ಪಕವಾಗಿ ನೀಡಬೇಕೆ೦ದು ರಿಟೇಲರ್‌ಗೆ ಸಾಕಷ್ಟು ಬಾರಿ ತಿಳಿ ಹೇಳಿ ಬಳಿಕ ಸಂಪರ್ಕ ಕಡಿತ ಮಾಡುವ ಕಾರ್ಯವನ್ನು ಕಂಪನಿ ಮಾಡಿದಲ್ಲಿ ಅಚ್ಚರಿ ಇಲ್ಲ. ಕಂಪನಿಗೆ ಗ್ರಾಹಕರು ಅಗತ್ಯವಾಗಿದ್ದು ಅವರಿಗೆ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ರಿಟೇಲರ್ ತಲುಪಿಸಿದಲ್ಲಿ ಆತನಿಗೂ ಅದರ ಲಾಭಾಂಶವನ್ನು ನೀಡುತ್ತಿದ್ದೇವೆ.

– ಸೂರಜ್. ಏರಿಯಾ ಮೆನೇಜರ್ ಏರ್‌ಟೆಲ್ ಬಂಟ್ವಾಳ

Posted in ಕರಾವಳಿ, ಕರ್ನಾಟಕ, ಜ.ಕಿ | ನಿಮ್ಮ ಟಿಪ್ಪಣಿ ಬರೆಯಿರಿ

ಬೆಳ್ತಂಗಡಿ: ಬಳ್ಳಮಂಜ ಶ್ರೀಅನಂತೇಶ್ವರ ದೇವಾಲಯದ ೩.೮ ಲಕ್ಷ ಮೌಲ್ಯದ ಸೊತ್ತು ಕಳವು

belthangadyಬೆಳ್ತಂಗಡಿ: ಮಚ್ಚಿನ ಗ್ರಾಮದ ಬಳ್ಳಮಂಜ ಶ್ರೀಅನಂತೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಬೆಳ್ಳಿ, ನಗದು ಸಮೇತ ಸುಮಾರು ರೂ.೩.೮ ಲಕ್ಷ ಮೌಲ್ಯದ ವಸ್ತುಗಳು ಕಳ ವಾಗಿವೆ.
ಆದಿತ್ಯವಾರ ರಾತ್ರಿ ಸುರಿಯುತ್ತಿದ್ದ ಭಾರೀ ಮಳೆಯ ಮಧ್ಯೆ ವಿದ್ಯುತ್ ಇಲ್ಲದ ಕಗ್ಗತ್ತಲೆಯ ನಡುವೆ ಈ ಕೃತ್ಯ ನಡೆದಿದೆ ಎಂದು ಹೇಳಲಾ ಗುತ್ತಿದೆ. ಕಳ್ಳರು ಮುಖ್ಯದ್ವಾರದ ಸನಿಹ ಇದ್ದ ಏಣಿಯೊಂದನ್ನು ಉಪಯೋಗಿಸಿ ಅದನ್ನು ಹೊರಗಿನಿಂದ ಸುತ್ತು ಪೌಳಿಗೆ ಅನಿಸಿಟ್ಟು ಹತ್ತಿ ಒಳಗಿನ ಬಾವಿಯ ದಂಡೆಯ ಮೇಲೆ ಕಾಲಿಟ್ಟು ಒಳಗೆ ಪ್ರವೇಶಿಸಿದ್ದಾರೆ. ಮೂಲ ದೇವರಾದ ಶ್ರೀಅನಂತೇಶ್ವರನಿಗೆ ಮಾಡಿದ್ದ ಚಿನ್ನ ಲೇಪಿತ ಬೆಳ್ಳಿಯ ಮುಖವಾಡ, ಈಶ್ವರನ ಗುಡಿಯ ಬಾಗಿಲನ್ನು ಒಡೆದು ಲಿಂಗಕ್ಕಿದ್ದ ಬೆಳ್ಳಿಯ ಮುಖವಾಡವನ್ನೂ ಅಪಹರಿಸಿ ದ್ದಾರೆ. ಕಾಣಿಕೆ ಡಬ್ಬಿಯ ಹಣ ಕಳವುಗೈದಿದ್ದಾರೆ. ದೇವರ ಪ್ರಭಾವಳಿ, ಬೆಳ್ಳಿಯ ಮುಖವಾಡ, ನಾಗನ ಚಿನ್ನ ಲೇಪಿತ ಬೆಳ್ಳಿಯ ಹೆಡೆಗಳು, ಪೀಠ ಕವಚ, ಗಣಪತಿ ಕವಚ, ಈಶ್ವರ ದೇವರ ಕವಚ, ಬೆಳ್ಳಿಯ ಕವಳಿಗೆ, ಬೆಳ್ಳಿಯ ಕಾಲು ದೀಪ, ಪೂಜಾ ಸಾಮಗ್ರಿಗಳು ಕಳವಾಗಿವೆ. ಕಾವಲುಗಾರ ರಾತ್ರಿ ಹನ್ನೊಂದುವರೆಗೆ ನಿದ್ರೆಗೆ ಶರಣಾಗಿದ್ದಾನೆಂದು ಹೇಳಲಾಗುತ್ತಿದೆ. ೧೫ ವರ್ಷದ ಹಿಂದೆಯೂ ಈ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಸ್ಥಳಕ್ಕೆ ಡಿವೈಎಸ್‌ಪಿ ಸದಾನಂದ ವರ್ಣೇಕರ್, ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಎಸ್.ನಾಯಕ್ ಭೇಟಿ ನೀಡಿದ್ದಾರೆ.

Posted in ಕರಾವಳಿ, ಕರ್ನಾಟಕ, ಜ.ಕಿ | ನಿಮ್ಮ ಟಿಪ್ಪಣಿ ಬರೆಯಿರಿ

ಕುಂದಾಪುರ : ವಾಹನ ಡಿಕ್ಕಿ ಹೊಡೆದು ತರುಣ ವೈದ್ಯನ ಸಾವು

clip_image001ಉಡುಪಿ: ಕುಂದಾಪುರದಲ್ಲಿ ನಡೆದ ರಸ್ತೆ ಅವಘಡದಲ್ಲಿ ವೈದ್ಯಕೀಯ ವಿದ್ಯಾರ್ಥಿ ಡಾ|ಚೇತನ್‌ ಡಿ. ರೈ (23) ಅಗಲಿದ್ದಾರೆ.

ವಿಜಯಾ ಬ್ಯಾಂಕ್‌ ನಿವೃತ್ತ ಪ್ರಬಂಧಕ ಕೆದಿಂಜ ಪರಾರಿ ಎಂ.ದಿನಕರ ರೈ ಅವರ ಏಕಮಾತ್ರ ಪುತ್ರ ಚೇತನ್‌ ಡಿ. ರೈ ಅವರು ಮಣಿಪಾಲ ಕೆಎಂಸಿಯಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡಿ ಪ್ರಸ್ತುತ ಹೌಸ್‌ ಸರ್ಜನ್‌ ತರಬೇತಿಯನ್ನು ಮಾಡುತ್ತಿದ್ದಾರೆ. ಚೇತನ್‌ ಅವರು ಪ್ರತಿಭಾವಂತ ವೈದ್ಯ ವಿದ್ಯಾರ್ಥಿ.

ಕುಂದಾಪುರ ಹೊರವಲಯದ ಅಂಕದಕಟ್ಟೆಯ ಮನೆಯಿಂದ ಉಡುಪಿಗೆ ಬರಲು ಮೇ 21ರಂದು ರಸ್ತೆ ಬದಿ ನಿಂತಿರುವಾಗ ಕಾರೊಂದು ಬಂದು ಢಿಕ್ಕಿ ಹೊಡೆಯಿತು.

ಚೇತನ್‌ ಅವರು ರಸ್ತೆ ಬದಿಗೆ ಬಿದ್ದ ಪರಿಣಾಮ ತಲೆಗೆ ಪೆಟ್ಟಾಯಿತು. ತತ್‌ಕ್ಷಣವೇ ಮಣಿಪಾಲ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಮೇ 26ರಂದು ಕೊನೆಯುಸಿರೆಳೆದರು. ಮೃತರು ತಂದೆ, ತಾಯಿಯನ್ನು ಅಗಲಿದ್ದಾರೆ.

Posted in ಕರಾವಳಿ, ಕರ್ನಾಟಕ, ವಾ.ಭಾ | ನಿಮ್ಮ ಟಿಪ್ಪಣಿ ಬರೆಯಿರಿ

ಜಾತಿ ವ್ಯವಸ್ಥೆ ಬೇಕು: ಕೇಮಾರು ಸ್ವಾಮೀಜಿ

bhat, moyili, kemaruಉಡುಪಿ: ಜಾತಿ, ಜಾತಿ ವ್ಯವಸ್ಥೆ, ಜಾತಿ ಆಚರಣೆಗಳು, ಕುಟುಂಬ, ನಾಗಾರಾಧನೆ, ದೇವ-ದೈವಾರಾಧನೆ ಅಗತ್ಯವಾಗಿ ಬೇಕು. ಇದೇ ರೀತಿ ಧರ್ಮ, ಧರ್ಮದ ಪರಿಪಾಲನೆಯನ್ನೂ ಮಾಡ ಬೇಕು. ಎಲ್ಲವನ್ನೂ ಆಚರಣೆಗೆ ತಂದಾಗಲೇ ದೇವರ ಪ್ರಾಪ್ತಿ, ಸಾಕ್ಷಾ ತ್ಕಾರ ಸಾಧ್ಯ. ಜಾತಿ ಆಚರಣೆ ಮತ್ತು ಧರ್ಮದ ಪರಿಪಾಲನೆಯೇ ನಮಗೆ ಪುಷ್ಠಿ, ತಾಕತ್ತು ಕೊಡುತ್ತದೆ. ಇದರಿಂ ದಲೇ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಅಂತಿಮವಾಗಿ ವಿಶ್ವ ಮಾನವರಾ ಗಬೇಕು ಎಂದು ಕೇಮಾರು ಸಾಂದೀಪನಿ ಸಾಧನಾ ಆಶ್ರಮದ ಈಶ ವಿಠಲ ದಾಸ ಸ್ವಾಮೀಜಿ ಹೇಳಿದರು.
ಆದಿತ್ಯವಾರ ಉಡುಪಿ ಬೀಡಿನಗುಡ್ಡೆಯ ದೇವಾಡಿಗರ ಸಭಾ ಭವನದಲ್ಲಿ ನಡೆದ ದೇವಾಡಿಗರ ಸೇವಾ ಸಂಘದ ಅಮೃತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಆಶೀ ರ್ವಚನ ನೀಡಿ ಅವರು ಮಾತನಾ ಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಪೆಟ್ರೋಲಿಯಂ ಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿಯವರು ಮಾತನಾಡಿ, ಜಾತಿ ಕೀಳರಿಮೆ ಸಲ್ಲದು. ಎಷ್ಟೇ ಸಣ್ಣ ಜಾತಿಯಾದರೂ ಸರಿ, ಅವಕಾಶ ಲಭಿಸಿದರೆ ಔನ್ನತ್ಯ ಸಾಧಿಸ ಬಹುದು. ಇದಕ್ಕೆ ಹಲವು ರೀತಿಯ ಅಗ್ನಿ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಸವಾಲುಗಳನ್ನು ಛಲ, ಇಚ್ಛಾಶಕ್ತಿ, ವಿಶ್ವಾಸದಿಂದ ಎದುರಿಸಿದಾಗ ಯಾವು ದನ್ನಾದರೂ ಸಾಧಿಸಲು ಸಾಧ್ಯ. ಇದಕ್ಕೆ ತಾನೇ ಸಾಕ್ಷಿ ಎಂದರು.

Posted in ಕರಾವಳಿ, ಕರ್ನಾಟಕ, ಜ.ಕಿ | ನಿಮ್ಮ ಟಿಪ್ಪಣಿ ಬರೆಯಿರಿ

ದ.ಕ ಜಿಲ್ಲೆಯಲ್ಲಿ 2.69 ಲಕ್ಷ ಜನರು ಆಧಾರ್ ಗೆ ನೋಂದಣಿ, 8 ಲಕ್ಷ ಮಂದಿಗೆ ಆಧಾರ್ ಕಾರ್ಡ್ ನೀಡುವ ಗುರಿ

Aadhar-Cardಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಮೇ 26ರವರೆಗೆ ಒಟ್ಟು 2,69,243 ಜನರನ್ನು ಆಧಾರ್ ಯೋಜನೆಯ ಪ್ರಕಾರ ನೋಂದಣಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 16 ಕೇಂದ್ರಗ ಳಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಪ್ರಸಕ್ತ ಜನಗಣತಿಯ ಪ್ರಕಾರ ಒಟ್ಟು 20 ಲಕ್ಷ ಜನಸಂಖ್ಯೆ ಇದ್ದು ಈ ಪೈಕಿ 12 ವರ್ಷಕ್ಕಿಂತ ಮೇಲ್ಪಟ್ಟವರನ್ನು ಪರಿಗಣನೆಗೆ ತೆಗೆದುಕೊಂಡರೆ ಸುಮಾರು 18 ಲಕ್ಷ ಜನರಿಗೆ ಆಧಾರ್ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಎಲ್ಲಾ ಯೋಜನೆಗಳಿಗೂ ಮುಂದಿನ ಹಂತದಲ್ಲಿ ಆಧಾರ್ ನೋಂದಣಿ ಕಡ್ಡಾಯಗೊಳಿಸುವ ಚಿಂತನೆ ನಡೆದಿದ್ದು, ರಾಜ್ಯ ಸರಕಾರವು ವಿವಿಧ ಯೋಜನೆಗೆ ಆಧಾರ್ ಕಡ್ಡಾಯಗೊಳಿಸುವ ಬಗ್ಗೆ ಆಲೋಚಿಸುತ್ತಿದೆ. ಈ ನಡುವೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಈ ವರ್ಷ ಅಂತ್ಯದೊಳಗೆ ಎಲ್ಲರಿಗೂ ಆಧಾರ್ ಗುರುತಿನ ಚೀಟಿ ನೀಡುವ ಭರವಸೆ ನೀಡಿದ್ದಾರೆ. ಪ್ರಸಕ್ತ ಜಿಲ್ಲೆಯಲ್ಲಿ ರುವ ಕೆಲವು ಆಧಾರ್ ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಕೆಲವು ಸಮಸ್ಯೆಗಳೊಂದಿಗೆ ವಿಳಂಬವಾಗುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಹ ಕೇಂದ್ರಗಳಿಗೆ ಹೆಚ್ಚಿನ ಕಂಪ್ಯೂಟರ್ ಅಳವಡಿಸಬೇಕೆ ನ್ನುವ ಬಗ್ಗೆ ಆಧಾರ್ ಕೇಂದ್ರಗಳಿಗೆ ಹಲವು ಬಾರಿ ಭೇಟಿ ನೀಡಿ ಹೆಸರು ನೋಂದಾಯಿಸಲಾಗದೆ ಹಿಂದಿರುಗಿದ ಜನ ಸಾಮಾನ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಆಧಾರ್ ಕೇಂದ್ರವಲ್ಲದೆ ರಾಷ್ಟ್ರೀಯ ಜನ ಸಂಖ್ಯೆ ನೋಂದಣಿ(ಎನ್‌ಎಂಪಿ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಸುಮಾರು 2 ಲಕ್ಷ ಜನರ ನೋಂದಣಿಯಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ (0-12 ವರ್ಷಗಳ ಒಳಗಿನವರು ಸೇರಿ) 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವುದು ಇತ್ತೀಚಿನ ಜನಗಣತಿಯ ಅಂಕಿ ಅಂಶಗಳು ಸೂಚಿ ಸುತ್ತವೆ.

‘ಯಾವುದೆ ಯೋಜನೆಗೆ ಆಧಾರ್ ಕಾರ್ಡ್ ಸಂಖ್ಯೆ ಅಳವಡಿಸುವ ಮೊದಲು ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಈ ಯೋಜನೆಗೆ ನೋಂದಣಿ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಧಾರ್ ಯೋಜನೆಗೆ ನೋಂದಣಿ ಪೂರ್ಣ ಗೊಂಡು ಸರಕಾರಿ ಯೋಜನೆಗೆ ಈ ಸಂಖ್ಯೆಯನ್ನು ಬಳಸಲು ಸ್ವಲ್ಪ ಕಾಲಾವಕಾಶ ಬೇಕಾಗಬಹುದು’ ಎಂದು ಜಿಲ್ಲಾ ಮಟ್ಟದಲ್ಲಿ ಆಧಾರ್ ಯೋಜನೆಯ ಮೇಲ್ವಿಚಾರಣಾ ಅಧಿಕಾರಿಗಳು ತಿಳಿಸಿದ್ದಾರೆ.

Posted in ಕರಾವಳಿ, ಕರ್ನಾಟಕ, ವಾ.ಭಾ | ನಿಮ್ಮ ಟಿಪ್ಪಣಿ ಬರೆಯಿರಿ

ಪೊಲೀಸ್ ಲಾಠಿಯಿಂದ ಪೊಲೀಸರಿಗೇ ಹಲ್ಲೆ!

clip_image001ಮಂಗಳೂರು: ಮಂಗಳೂರು ಉತ್ತರ (ಬಂದರು) ಠಾಣೆಯ ಇಬ್ಬರು ಹೆಡ್‌ಕಾನ್‌ಸ್ಟೇಬಲ್‌ಗೆ ಮದ್ಯದ ಅಮಲಿ ನಲ್ಲಿ ತಂಡವೊಂದು ಹಲ್ಲೆ ನಡೆಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.

ದಾಮೋದರ (54) ಮತ್ತು ಈಶ್ವರ ಸ್ವಾಮಿ (48) ಹಲ್ಲೆಗೊಳಗಾದ ಪೊಲೀಸ ರಾಗಿದ್ದು, ಅವರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ಕುದ್ರೋಳಿ ಸಮೀಪದ ಅಳಕೆ ಮಾರ್ಕೆಟ್ ಬಳಿ ಗುಂಪೊಂದು ಮಾತಿನ ಚಕಮಕಿ ನಡೆ ಸುತ್ತಿದೆ ಎಂದು ಸ್ಥಳೀಯರು ನಗರದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಸೂಚನೆ ಮೇರೆಗೆ ಬಂದರು ಠಾಣೆಯ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಪರಸ್ಪರ ಚಕಮಕಿ ನಡೆಸುತ್ತಿದ್ದ ತಂಡ ಒಂದಾಗಿ ಇವರಿಬ್ಬರ ಮೇಲೆ ಹಲ್ಲೆ ನಡೆಸಿದೆ. ಅದೂ ಪೊಲೀಸರ ಕೈಯಿಂದ ಲಾಠಿ ಕಿತ್ತುಕೊಂಡು!.

ಲಾಠಿ ಕಿತ್ತುಕೊಂಡರು: ರವಿವಾರ ರಾತ್ರಿ ಸುಮಾರು 1.15ರ ವೇಳೆಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ನಾನು ಮತ್ತು ಈಶ್ವರ ಸ್ವಾಮಿ ಅಳಕೆಗೆ ಹೋದೆವು. ಅಲ್ಲಿ ಐದಾರು ಮಂದಿಯ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಪಿಸಿಆರ್ ವಾಹನದಿಂದ ಇಳಿದ ನಾನು ‘ಈ ತಡರಾತ್ರಿ ಇಲ್ಲೇನು ಮಾಡುತ್ತಿದ್ದೀರಿ ಎಂದು ಕೇಳಿದ ತಕ್ಷಣ ಒಬ್ಬಾತ ನಿಮಗೆ ತೊಂದರೆ ಉಂಟಾ ಎಂದು ಪ್ರಶ್ನಿಸಿದ. ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ ಎಂದು ಹೇಳುವಷ್ಟರಲ್ಲಿ ಒಬ್ಬಾತ ನನ್ನ ಕಾಲರ್ ಹಿಡಿದು ಲಾಠಿ ಕಿತ್ತು ಕೊಂಡ. ಹಾಗೇ ಎಲ್ಲರೂ ಸೇರಿ ನನಗೆ ಹೊಡೆಯ ತೊಡಗಿದರು. ಬಿಡಿಸಲು ಬಂದ ಈಶ್ವರ ಸ್ವಾಮಿಗೂ ಲಾಠಿಯಿಂದ ಹಲ್ಲೆ ನಡೆಸಿ ದರು. ಬೆನ್ನು, ಸೊಂಟಕ್ಕೆ ತುಳಿದರು. ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದರು. ಅವಾಚ್ಯವಾಗಿ ನಿಂದಿಸುತ್ತಿದ್ದರು. ಈಶ್ವರಸ್ವಾಮಿ ಸ್ವಲ್ಪ ದೂರ ಓಡಿ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿ ದರು. ಅದು ತಿಳಿದೊಡನೆ ಆರೋಪಿ ಗಳು ನನ್ನನ್ನು ಬಿಟ್ಟು 2 ಕಾರಿನಲ್ಲಿ ಪರಾರಿ ಯಾದರು ಎಂದು ಹಲ್ಲೆಗೊಳಗಾಗಿರುವ ದಾಮೋದರ ಪತ್ರಿಕೆಗೆ ತಿಳಿಸಿದರು.

ಸಮವಸ್ತ್ರಕ್ಕೂ ಬೆಲೆ ಇಲ್ಲ:  ನಾನು ಪೊಲೀಸ್ ಇಲಾಖೆಗೆ ಸೇರಿ 22 ವರ್ಷ ಆಯಿತು. ದಾಮೋದರ ಅವರಿಗೆ 28 ವರ್ಷದ ಸೇವಾನುಭವವಿದೆ. ಇವಿಷ್ಟು ವರ್ಷದಲ್ಲಿ ನಮಗಿಬ್ಬರಿಗೂ ಇಂತಹ ಕೆಟ್ಟ ಅನುಭವ ಆಗಿಲ್ಲ. ನಾವಿಬ್ಬರು ಸಮವಸ್ತ್ರ ಧರಿಸಿದ್ದರೂ ಆ ತಂಡ ಅದಕ್ಕೆ ಗೌರವ ಕೊಡಲಿಲ್ಲ. ಲಾಠಿ ಕಿತ್ತು ಬಾಸುಂಡೆ ಬರುವಷ್ಟು ಹೊಡೆದರು. ಅವರು ಯಾರು, ಏನು ಎಲ್ಲಿ ಅಂತ ಗೊತ್ತಿಲ್ಲ. ಮುಖ ಪರಿಚಯವೂ ಇಲ್ಲ. ಆದರೆ ಗುರುತು ಹಿಡಿಯಬಲ್ಲೆವು ಎನ್ನುತ್ತಾರೆ ಈಶ್ವರ ಸ್ವಾಮಿ.

ಅಧಿಕಾರಿಗಳ ಭೇಟಿ: ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಕವಿತಾ, ಬಂದರ್ ಎಸ್ಸೈ ರಾಮಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ದ್ದಾರೆ. ಆರೋಪಿಗಳ ಸುಳಿವು ಲಭಿಸಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಎಸ್ಸೈ ರಾಮಕೃಷ್ಣ ಪತ್ರಿಕೆಗೆ ತಿಳಿಸಿದ್ದಾರೆ.

Posted in ಕರಾವಳಿ, ಕರ್ನಾಟಕ, ವಾ.ಭಾ | ನಿಮ್ಮ ಟಿಪ್ಪಣಿ ಬರೆಯಿರಿ